ಗುರು 1 

ವಿದ್ಯಾದಾನಮಾಡುವವನು, ಉಪಾಧ್ಯಾಯ. ಗುರು ಎಂಬ ಪದದಲ್ಲಿನ ಗು ಎಂಬುದಕ್ಕೆ ಅಂಧಕಾರವೆಂದೂ ರು ಎಂಬುದಕ್ಕೆ ಅದನ್ನು ನಿರೋಧಿಸುವವನೆಂದೂ ಅರ್ಥೈಸುತ್ತಾರೆ. ಗುರುಪೂಜೆಯಿಲ್ಲದೆ ಯಾವ ಕಾರ್ಯವನ್ನೂ ಆರಂಭಿಸುವಂತಿಲ್ಲ. ತಂದೆ, ಉಪನಯನ ಮಾಡಿದವ, ವಿದ್ಯಾದಾನ ಮಾಡಿದವ, ಅನ್ನದಾತ, ಭಯದಲ್ಲಿ ರಕ್ಷಿಸಿದವ-ಈ ಐವರನ್ನೂ ಗುರುಗಳೆಂದು ಪರಿಗಣಿಸುತ್ತಾರೆ. ಆಧ್ಯಾತ್ಮಿಕ ಅಥವಾ ಧಾರ್ಮಿಕ ಪಂಥವೊಂದರ ನಾಯಕ ಅಥವಾ ಬೋಧಕ. ಪ್ರಾಚೀನ ಭಾರತದ ಶಿಕ್ಷಣಪದ್ಧತಿಯಲ್ಲಿ ಶಿಷ್ಯರನ್ನು ಗುರು ತನ್ನ ಆಶ್ರಮಕ್ಕೆ ಬರಮಾಡಿಕೊಂಡು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣಗಳೆರಡನ್ನೂ ನೀಡುತ್ತಿದ್ದ. ಶಿಷ್ಯರು ತಮ್ಮ ಗುರುವಿನ ಬಗ್ಗೆ ಅನನ್ಯಭಕ್ತಿಯಿಂದಿದ್ದು ವಿದ್ಯಾರ್ಜನೆ ಮಾಡುತ್ತಿದ್ದರು; ಅವರ ಮನೆಯಲ್ಲೆ ವಾಸಿಸುತ್ತಿದ್ದು ಮನೆಗೆಲಸವನ್ನು ಮಾಡಿಕೊಡುತ್ತ ಭಕ್ತಿ ಗೌರವಗಳಿಂದ ನಡೆದುಕೊಳ್ಳುತ್ತಿದ್ದರು. 

	ಒಂದು ಧಾರ್ಮಿಕ ಪಂಥಕ್ಕೆ ಅದು ಆರಾಧಿಸುವ ದೇವತೆಯೇ ಆದಿಗುರು. ಅನಂತರ ಆ ಪಂಥಕ್ಕೆ ನಾಯಕರಾಗತಕ್ಕ ಮಾನವರೂಪಿನ ಗುರು ಅಂದಿಗೆ ಆ ಪರಂಪರೆಯಲ್ಲಿ ಕೊನೆಯ ಗುರು. ಆತ ತನ್ನ ಕೊನೆಗಾಲದಲ್ಲಿ ಯೋಗ್ಯ ಶಿಷ್ಯನೊಬ್ಬನನ್ನು ಆರಿಸಿ ಗುರುಪೀಠಕ್ಕೆ ತರುವ ವಾಡಿಕೆ ಇದೆ. ಪರಂಪರೆಯಲ್ಲಿ ಬರುವ ಆದಿಗುರುವಿನ ಅನಂತರದ ಗುರುಗಳೆಲ್ಲ ಧರ್ಮದ ದೇವತೆಯ ಅವತಾರವೆಂಬ ನಂಬಿಕೆಯುಂಟು. 

	ಎಲ್ಲ ಧಾರ್ಮಿಕ ಪಂಥಗಳಿಗೂ ಒಬ್ಬ ಗುರು ಅಗತ್ಯವೆಂದು ಭಾವಿಸಲಾಗಿದೆ. ಸತ್ಯಸ್ವರೂಪ ಮೂಲತತ್ತ್ವಗಳು ಧ್ಯಾನ ಅಥವಾ ಗ್ರಂಥಾವಲೋಕನದಿಂದಲೇ ಲಭಿಸಲಾರವೆಂಬುದೂ ದೈವಪ್ರೇರಣೆಯ ಪರಂಪರೆಯ ಗುರುವೊಬ್ಬ ಅಗತ್ಯವೆಂಬ ಭಾವನೆಯೂ ಇದಕ್ಕೆ ಮುಖ್ಯಕಾರಣ. ಆದಿಗುರುವಿನಿಂದ ಪಡೆದುಕೊಂಡು ಪರಂಪರಾನುಗತವಾಗಿ ಮುಂದಿನ ಗುರುಗಳಿಗೆ ಹಸ್ತಗತವಾಗುತ್ತ ಬಂದಿರುವ ಆ ಸತ್ಯದರ್ಶನ ಕೇವಲ ಮಂತ್ರಪಠನದಿಂದ ಲಭ್ಯವಾಗುವಂತಿಲ್ಲ; ಅದು ಗುರು ಮುಖದಿಂದಲೇ ಲಭಿಸಬೇಕು. ಎಂದರೆ ಸತ್ಯದ ಸಾಕ್ಷಾತ್ಕಾರ ಮಾಡಿಕೊಳ್ಳುವುದು ಗುರು ಅನುಗ್ರಹಿಸುವ ದೀಕ್ಷೆಯಿಂದ ಮಾತ್ರ ಸಾಧ್ಯ. ಧ್ಯಾನಮಾರ್ಗ ಕಠಿಣವೂ ದುರ್ಗಮವೂ ಆದುದು. ಅದಕ್ಕೆ ಪೂರ್ವಭಾವಿಯಾಗಿ ಸಾಧಿಸಬೇಕಾದ ಶಾಂತಿ ಸಂಯಮಗಳೂ ಅಷ್ಟೆ. ಅವನ್ನು ಅನುಷ್ಠಾನಕ್ಕೆ ತರಲೂ ತಕ್ಕ ಗುರುವಿನ ನಿರ್ದೇಶನ ಬೇಕು. ಆದ್ದರಿಂದ ಯಾವ ಧರ್ಮದ ಅನುಷ್ಠಾನಕ್ಕೇ ಆಗಲಿ ತಕ್ಕ ಗುರುವೊಬ್ಬನ ಆಯ್ಕೆ ಅನಿವಾರ್ಯವಾಗುತ್ತದೆ. 

	ಕೆಲವು ವೇಳೆ ಖ್ಯಾತ ಗುರುಗಳನೇಕರು ಆ ಧಾರ್ಮಿಕ ಪಂಥದ ದೇವತೆಗಿಂತ (ಆದಿಗುರು) ಹೆಚ್ಚು ಪೂಜ್ಯರಾಗಿರುವುದುಂಟು. ಶ್ರೀಕೃಷ್ಣನಿಗಿಂತ ಹೆಚ್ಚಿನ ಭಕ್ತಿಗೌರವ ಪೂಜ್ಯತೆಗಳಿಂದ ಭಕ್ತರು ಆ ಪಂಥದ ಗುರುವಾಗಿದ್ದ ಚೈತನ್ಯನನ್ನು ಕಾಣುವರು. ದೇವತೆಯ ಪ್ರತಿಮೆಗೆ ಅವಕಾಶವಿಲ್ಲದೆಡೆಗಳಲ್ಲೂ ಗುರುವಿನ ಪ್ರತಿಮೆಯೆ ಪೂಜೆಗೆ ಅವಕಾಶವುಂಟು. ಕೆಲವು ಸಂದರ್ಭಗಳಲ್ಲಿ ಮಾನವರೂಪದ ಸಜೀವ ಗುರುವನ್ನೇ ಪೂಜಿಸುವುದೂ ಉಂಟು. ಅವನಿಗೆ ಆರತಿ ಎತ್ತುವುದು, ಧೂಪ ಹಾಕುವುದು, ಮಂತ್ರ ಹೇಳುವುದು, ಅಡ್ಡಬೀಳುವುದು, ಪಾದಪೂಜೆ ಮಾಡುವುದು, ಭಿಕ್ಷೆಯಿಕ್ಕುವುದು, ಇವೆಲ್ಲ ಸೇವಾಕಾರ್ಯಗಳೂ ನಡೆಯುತ್ತವೆ. ಕೆಲವು ಪಂಥಗಳಲ್ಲಿ ಪಾದಪೂಜೆಮಾಡಿ, ಪಾದತೊಳೆದ ನೀರನ್ನು ಭಕ್ತವೃಂದದವರು ಸೇವಿಸುವರು. ಕೆಲವು ಗುಡ್ಡಗಾಡು ಬಣಗಳಲ್ಲಿ ಗುರು ಆಗಿದ ತಾಂಬೂಲವನ್ನು ಶಿಷ್ಯಾದಿಗಳು ಸೇವಿಸುವುದೂ ಉಂಟು. ಭಾರತದಲ್ಲಿ ಇಂದಿಗೂ ಗುರುವೇ ದೇವರೆಂದು ಪೂಜಿಸುತ್ತಿರುವ ಅನೇಕ ಧಾರ್ಮಿಕ ಪಂಥಗಳಿವೆ. 

	ಗುರು ಊರಿಗೆ ಬಂದಾಗ ಅವನ ಭಕ್ತರು ನಾನು ಮುಂದೆ ತಾನು ಮುಂದೆ ಎಂದು ತಮ್ಮ ಮನೆಗೆ ಬಿಜಯಮಾಡಲು ಬಿನ್ನವಿಸಿಕೊಳ್ಳುವರು; ತಮ್ಮ ಕಾಣಿಕೆ ಕೈಂಕರ್ಯಗಳನ್ನು ಸಲ್ಲಿಸಿ ಕೃತಕೃತ್ಯರಾದೆವೆಂದು ಭಾವಿಸುವರು.

	ಸಿಕ್ಖರಲ್ಲಿ ಗುರುವಿಗೆ ವಿಶಿಷ್ಟ ಅರ್ಥವಿದೆ. ಆ ಪಂಥದ ಪರಂಪರೆಯಲ್ಲಿ ಬಂದ ಹತ್ತುಮಂದಿ ಗುರುಗಳಿಗೆ ಮಾತ್ರ ಅದು ಅನ್ವಯಿಸುತ್ತದೆ. ಅವರಲ್ಲಿ ಕೊನೆಯ ಗುರು ಅದನ್ನು ಮುಂದೆ ಮತ್ತಾರಿಗೂ ಬಳಸದಿರಬೇಕೆಂದೂ ಅದನ್ನು ಮುಂದೆ ಅವರ ಪವಿತ್ರ ಗ್ರಂಥಕ್ಕೆ (ಗ್ರಂಥ್ ಸಾಹೆಬ್) ಮಾತ್ರ ಬಳಸಬೇಕೆಂದೂ ವಿಧಿಸಿದನು. ಈಗ ಆ ಪಂಥದವರು ತಮ್ಮ ಪವಿತ್ರ ಗ್ರಂಥವನ್ನು ಭಕ್ತಿಯಿಂದ ದೇವರೆಂದು ಭಾವಿಸಿ ಪೂಜಿಸುವರು. 

	ವೀರಶೈವಧರ್ಮದಲ್ಲಿ ಗುರುತತ್ತ್ವವನ್ನು ಮೋಕ್ಷೋಪಾಯಗಳಾದ ಅಷ್ಟಾವರಣದಲ್ಲಿ ಸೇರಿಸಲಾಗಿದೆ. ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ಭಸ್ಮ, ರುದ್ರಾಕ್ಷಿ, ಮಂತ್ರ-ಇವು ಬಹಿರಂಗ ಅಷ್ಟಾವರಣಗಳು. ಇವುಗಳಲ್ಲಿ ಮೊದಲ ಮೂರು ಪೂಜ್ಯವಾದುವು. 

	(ನೋಡಿ- ಗುರುಕುಲ)
(ನೋಡಿ- ಗುರುಕುಲ-ಕಾಂಗ್ರಿ-ವಿಶ್ವವಿದ್ಯಾಲಯ)
(ನೋಡಿ- ಗುರುಶಿಷ್ಯ-ಬಾಂಧವ್ಯ)                                     (ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ